Wednesday, August 4, 2010

ಹಿಡಿ-ಇಡೀ ಬದುಕ…

ಓದುವವರ ನೋಡಿ, ಬರೆವವರ ಕಂಡು

ನಾನೋದಬೇಕೆನಿಸಿತ್ತಿತ್ತು, ಬರೆಯಲೇಬೇಕೆನಿಸುತ್ತಿತ್ತು.

ಓದಿ-ಬರೆವ ಲೆಕ್ಕಾಚಾರ ನನಗೆ ಸಿಕ್ಕು,

ನಾನೋದಲಿಲ್ಲ, ಬರೆಯಲೂ ಇಲ್ಲ.

ಹೀಗಿರಲು,

"ಓದಲು ಕಲಿ, ಬರೆಯಲು ಕಲಿ" ಎಂದು

ಹೇಳಿದಾಗಲೆಲ್ಲಾ ನಾನೋಡಿದ್ದೇನೆ.

ಓದಿದವರು, ಬರೆದವರು ಹಾಗೆ ಬದುಕದೆ

ರಿದೇ ಓದಿಬರೆದವರು ಈ ಬದುಕಿಗೆ ಯಾವ ಲೆಕ್ಕ?.

ಹೀಗಾಗಿ ನನಗೆ ನಾನೇ ಮತ್ತೆ ಮತ್ತೆ ಕೇಳೇಕೇಳಿಕೊಳ್ಳುತ್ತೇನೆ

ಬೇಕೇ ಬದುಕಲು ಓದು? ಬೇಕೇ ಬದುಕಲು ಬರಹ?

ಬೇಕೇ ಬೇಕೇನು ನಮಗಿಂದು ಲೆಕ್ಕ ಎಂದು?

ಬದುಕನೋದಿದವರು, ಬದುಕ ಬರದವರು

ಬದುಕನುದ್ದಕೂ ಲೆಕ್ಕಿಸಿದವರು ಬದುಕಿದರೇ? ಬದುಕಿದ್ದಾರೆಯೇ?

ತಿಳಿಯಿತೇ ನಿಜವಾಗಿಯೂ ಬದುಕು ಏನೆಂದು? ಬದುಕಬೇಕೆಂದು.

ಹೇಳಿದೆನಲ್ಲವೇ ನಾನಾಗಲೇ

ಓದು ಬರಹ ಸಿಕ್ಕರೂ ನನಗವು ದಕ್ಕಲಿಲ್ಲವೆಂದು,

ಹೀಗಾಗಿ ನನ್ನ ಬದುಕಿಗೆ ಓದುಬರಹಗಳ ಲೆಕ್ಕಾಚ್ಚಾರಗಳಿಲ್ಲ.

ಈಗ ಎಲ್ಲವೂ ನಿಚ್ಚಳವಾಯ್ತೇ?

ನನಗೆ ಓದು ಬರಹ ಲೆಕ್ಕಾ ಚಾರಗಳೆಲ್ಲ ಸಿಕ್ಕೂ,

ನಾನೇಕೆ ಓದಲಿಲ್ಲ, ಬರೆಯಲಿಲ್ಲ, ಲೆಕ್ಕಿಸಲೇ ಇಲ್ಲವೆಂದು.

ಆದರೂ ನನಗೆ ಬರುವುದೇ ಬದುಕು.

ಕೇಳುತ್ತಿಲ್ಲ, ಹೇಳುತ್ತಿರುವೆ.

ಬದುಕನೋದಿ ಬದುಕುಬರದು

ಬದುಕ ಭಾಗಿಸಿ, ಕಳೆದು, ಗುಣುಗುಣಿಸಿ ಕೂಡಿದರೂ

ಉಳಿಯುವುದೊಂದೇ ಒಂದು. ಅದುವೇ ಬದುಕು, ಅಲ್ಲವೇ?

ಅದಕ್ಕೆಂದೇ ಬದುಕ ಓದಲಾರೆ ನಾ

ಬರದ ಬದುಕನುದ್ದಕೇ ಲೆಕ್ಕಿಸುತ್ತಿರಲಾರೆ,

ಬರೀ ಬದುಕುತ್ತಿರುವೆ.

ಬದುಕನೋದೇ ಓದುವ, ಬದುಕನುದ್ದಕೇ ಬರೆವ,

ಓ ಪ್ರಿಯರೇ ಸಾಕುಬಿಡಿ, ಬದುಕಲೆಕ್ಕಿಸದೇ

ಇರುವ ಬದುಕ ಒಮ್ಮೆಗೇ ಬದುಕಿಬಿಡಿ.

ಇಡಿಯಾದ ಬದುಕ ಹೀಗೆ ಓದಿ, ಬರೆದು, ಲೆಕ್ಕಿಸಿ ತುಂಡರಿಸುವಿರೇಕೆ?

ಬಿಟ್ಟುಬಿಡಿ, ಬಿಡಿ ಬಿಡಿಯಾದ ಬದುಕ ಹಿಡಿಯಲೆತ್ನಿಸುವಿರೇಕೆ?

ಒಮ್ಮೆಯಾದರೂ ಯೋಚಿಸದೆ ನೋಡಿ

ತಡವೇಕೆ? ಹಿಡಿದುಬಿಡಿ

ಬಿಗಿಯಾಗಿ ಇಡಿಯಾದ ಬದುಕ

*****

No comments:

Post a Comment